ಶಿರಸಿ: ಕಳೆದ ಹಲವು ತಿಂಗಳುಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಅರುಣ್ ಅಲಿಯಾಸ್ ಅರ್ಜುನ್ ಎಂಬಾತನನ್ನು ಶಿರಸಿ ಗ್ರಾಮೀಣ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿರಸಿ ತಾಲೂಕಿನ ಮಳಲಿ ನಿವಾಸಿ ಅರುಣ್ @ ಅರ್ಜುನ್ ಲಕ್ಷ್ಮಣ ಗೌಡ (28) ಎಂದು ಗುರುತಿಸಲಾಗಿದೆ. ಈತನ ಮೇಲೆ ಶಿರಸಿ ಗ್ರಾಮೀಣ, ಬನವಾಸಿ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಹತ್ತಾರು ಗಂಭೀರ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಪೋಕ್ಸೋ (POCSO), ಬ,ಲಾತ್ಕಾರ, ಕೊ,ಲೆಯತ್ನ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಗಳಿವೆ. ಇದರೊಂದಿಗೆ ವಂಚನೆ, ಮಹಿಳೆಯರಿಗೆ ಕಿರುಕುಳ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅ,ಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುವ ಪ್ರಕರಣಗಳೂ ದಾಖಲಾಗಿವೆ.
ಪೊಲೀಸರಿಗೇ ಸವಾಲಾಗಿದ್ದ ರೌಡಿ ಆರೋಪಿಯ ವಿರುದ್ಧ ಈಗಾಗಲೇ ನ್ಯಾಯಾಲಯದಿಂದ ಮೂರು ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಲಾಗಿತ್ತು ಮತ್ತು ಒಂದು ಪ್ರಕರಣದಲ್ಲಿ ಈತನನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಲಾಗಿತ್ತು. ಈ ಹಿಂದೆ ಪೊಲೀಸರು ಈತನನ್ನು ಬಂಧಿಸಲು ಹೋದಾಗಲೆಲ್ಲಾ ಪೊಲೀಸರ ಮೇಲೆಯೇ ಹಲ್ಲೆ ಮಾಡುವುದು ಅಥವಾ ತನಗೆ ತಾನೇ ಗಾಯ ಮಾಡಿಕೊಂಡು ತಪ್ಪಿಸಿಕೊಳ್ಳುತ್ತಿದ್ದನು. ಕಾಡಿನ ಹಾದಿಗಳ ಬಗ್ಗೆ ಅರಿವಿದ್ದ ಈತ ಪೊಲೀಸರಿಗೆ ದೊಡ್ಡ ಸವಾಲಾಗಿದ್ದನು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ನಿರೀಕ್ಷಕ ರಮೇಶ ಶಂ. ಹೂಗಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾಡಿನಲ್ಲಿ ಅಡಗಿದ್ದ ಆರೋಪಿಯನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಸಂತೋಷಕುಮಾರ್ ಎಂ, ಅಶೋಕ ಆರ್. ರಾಠೋಡ, ಎಎಸ್ಐ ಪ್ರಕಾಶ ತಳವಾರ ಹಾಗೂ ಸಿಬ್ಬಂದಿಗಳಾದ ವಿಶ್ವೇಶ್ವರ ಹೆಗಡೆ, ಮಾಂತೇಶ ಬಾರಕೇರ, ಅಶೋಕ ನಾಯ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸತತ ಪ್ರಯತ್ನದ ನಂತರ ಕುಖ್ಯಾತ ಆರೋಪಿಯನ್ನು ಬಂಧಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
